ಕಾಡುಸುವರ್ಣ ಗೆಡ್ಡೆ

ಅರಿಸೀಮ ಎಂಬ ಹೆಸರಿನ ಮೂಲಿಕೆ ಸಸ್ಯ. ಏರೇಸೀ ಕುಟುಂಬಕ್ಕೆ ಸೇರಿದೆ. ಈ ಜಾತಿಯಲ್ಲಿ ಸುಮಾರು 105 ಪ್ರಭೇದಗಳಿವೆ. ಇವು ಏಷ್ಯ, ಅಬಿಸೀನಿಯ ಮತ್ತ ಉತ್ತರ ಅಮೆರಿಕದ ಉಷ್ಣ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುತ್ತವೆ. ಹಿಮಾಲಯದ 4000' - 7000' ವರೆಗಿನ ಪ್ರದೇಶಗಳಲ್ಲಿ ಸುಮಾರು 30 ಪ್ರಭೇದಗಳು ಬೆಳೆಯುತ್ತವೆ. ದಕ್ಷಿಣ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಸುಮಾರು 5 ಪ್ರಭೇದಗಳು ಕಾಣಬರುತ್ತವೆ. ಇದರ ಕಾಂಡ ಆಲೂಗೆಡ್ಡೆಯಲ್ಲಿರುವಂತೆ ನೆಲದೊಳಗೇ ಹುದುಗಿರುವ ಟ್ಯೂಬರ್ ಬಗೆಯದು. ಕಾಂಡದೊಳಗೆ ಅಧಿಕಪ್ರಮಾಣದಲ್ಲಿ ಪಿಷ್ಟವಿದೆ. ಕ್ಯಾಲ್ಸಿಯಮ್ ಆಕ್ಸಲೇಟ್ ಲವಣದ ಹರಳುಗಳೂ ಇವೆ. ಇವು ಇರುವುದರಿಂದ ತಿಂದರೆ ನಾಲಗೆ ಕಡಿತ ಬರುತ್ತದೆ. ಗೆಡ್ಡೆಯನ್ನು ಅನೇಕ ಸಾರಿ ನೀರಿನಲ್ಲಿ ಕುದಿಸಿ ಆ ನೀರನ್ನು ಹೊರಚೆಲ್ಲಿ, ಅನಂತರ ಉಪಯೋಗಿಸಬಹುದು.

(ಎಚ್.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ